Sunday, December 5, 2010

ಒಂದು ಐತಿಹಾಸಿಕ ಚುನಾವಣಾ ಫಲಿತಾಂಶದ ಸುತ್ತ. .


ಒಂದು ಐತಿಹಾಸಿಕ ಚುನಾವಣಾ ಫಲಿತಾಂಶದ ಸುತ್ತ. .
‘ಕರ್ನಾಟಕಕಕ್ಕೆ ಬಿಹಾರ ಮಾದರಿಯಾಗಲಿ’
ಎಂದು ಎರಡು ವರ್ಷಗಳ ಹಿಂದೆ ಯಾರಾದರೂ ಹೇಳಿದ್ದರೆ, ಕನ್ನಡಿಗರು ಅಂತಹವರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿದ್ದರೇನೋ? ಆದರೆ ಕಳೇದ ಮೂರ್‍ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಸಾರ್ವಜನಿಕ ನಿಟ್ಟುಸಿರಿನ ರೂಪದಲ್ಲಿ ಈ ಮಾತು ಹೊರಬೀಳುತ್ತಿದೆ. ಬಿ.ಎಸ್. ಯಡಿಯೂರಪ್ಪನವರಿಗೆ ಜೀವದಾನ ಸಿಕ್ಕಿದ ದಿನವೇ ಬಿಹಾರ ವಿಧಾನ ಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗದೆ ಇದ್ದಿದ್ದರೆ ಬಹುಶಃ ಜನ ಈ ಎರಡು ರಾಜ್ಯಗಳನ್ನು ಜತೆಯಲ್ಲಿ ನಿಲ್ಲಿಸಿ ಹೋಲಿಕೆ ಮಾಡಿಕೊಳ್ಳುತ್ತಿರಲಿಲ್ಲವೇನೋ? ಒಂದೆಡೆ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಲಾಲು ಪ್ರಸಾದ್ ಕಟ್ಟಿ ಬೆಳೆ ಸಿದ್ದ ಜಾತಿ ಕೋಟೆಯನ್ನು ಭೇದಿಸಿ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಾತಿಯನ್ನು ಬಳಸಿಕೊಂಡು ಕುರ್ಚಿ ಉಳಿಸಿಕೊಂಡಿದ್ದಾರೆ. ಯಾರು ಯಾರಿಗೆ ಮಾದರಿಯಾಗಬೇಕು ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯ ಇದೆಯೇ?
ಬಿಹಾರಕ್ಕೆ ಹೆಮ್ಮೆಪಟ್ಟುಕೊಳ್ಳುವ ಇತಿಹಾಸ ಇದೆ. ಗೌತಮ ಬುದ್ಧ. ಮಹಾವೀರ. ಗುರು ಗೋವಿಂದ ಸಿಂಗ್ ಮೊದಲಾದ ಸಮಾಜ ಸುಧಾರಕರೆಲ್ಲಾರೂ ಹುಟ್ಟಿದ ನಾಡು ಅದು. ಆದರೆ ಆ ಸಮಾಜ ಸುಧಾರಕರ ಅನುಯಾಯಿಗಳ ಪರಂಪರೆ ಆ ರಾಜ್ಯದಲ್ಲಿ ಮುಂದುವರಿದುಕೊಂಡು ಬರಲಿಲ್ಲ. ಬೌದ್ಧ, ಜೈನ ಇಲ್ಲವೇ ಸಿಕ್ಖರನ್ನು ಬಿಹಾರದಲ್ಲಿ ಭೂತಗನ್ನಡಿ ಇಟ್ಟುಕೊಂಡು ಹುಡುಕಾಡಬೇಕು. ಅಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿರ್ಣಾಯಕರೆನಿಸಿಕೊಂಡ ಭೂಮಿಹಾರ, ರಜಪೂತ, ಯಾದವ, ಕುರ್ಮಿ, ಕೊಯಿರಿಗಳ್ಯಾರು ಬುದ್ಧ-ಮಹಾವೀರರ ಅನುಯಾಯಿಗಳಲ್ಲ. ಕರ್ನಾಟಕದ ಪರಿಸ್ಥಿತಿ ಬಿಹಾರಕ್ಕಿಂತ ಭಿನ್ನ. ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ನಡೆದ ಧಾರ್ಮಿಕ ಚಳವಳಿ ಕೇವಲ ಇತಿಹಾಸವಾಗಿ ಉಳಿಯದೆ ಅದು ಧಾರ್ಮಿಕ ಪರಂಪರೆಯಾಗಿ ಮುಂದುವರಿದುಕೊಂಡು ಬಂದಿದೆ. ಜಾತಿನಾಶದ ಉದ್ದೇಶ ಹೊಂದಿದ್ದ ಬಸವ ಚಳವಳಿ ಅಂತಿಮವಾಗಿ ಇನ್ನೊಂದು ಜಾತಿಯಾಗಿ ಕೊನೆಗೊಂಡ ವಿಪರ್‍ಯಾಸ ನಡೆದರೂ ಕರ್ನಾಟಕದ ಹಿಂದೂ ಗುಂಪಲ್ಲಿರುವ ಅತೀ ದೊಡ್ಡ ಜಾತಿಯ ಜನರಿಗೆ ಬಸವಣ್ಣನವರೇ ಧಾರ್ಮಿಕ ಗುರು. ಬಸವ ಚಳವಳಿಯ ಉಪ ಉತ್ಪನ್ನವಾದ ವಚನಗಳು ಒಳ್ಳೆಯ ಮನುಷ್ಯರ್‍ಆಗಬೇಕೆಂದು ಅಂದು ಕೊಂಡವರೆಲ್ಲರ ಪಾಲಿನ ಸಂವಿಧಾನದಂತಿವೆ.
ಆದರೆ ಎಂತಹ ವಿಪರ್ಯಾಸ? ಕರ್ನಾಟಕಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರು, ಬಡವರು, ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯ ಬಿಹಾರ. ಆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ೧೫ ರಷ್ಟಿರುವ ಯಾದವರ ಏಕೈಕ ನಾಯಕರಾಗಿದ್ದವರು ಲಾಲುಪ್ರಸಾದ್. ಮೈ ತುಂಬಾ ಹೊಲಸು ಮಾಡಿಕೊಂಡ ಭ್ರಷ್ಟಾಚಾರದ ಆರೋಪಗಳೇನೇ ಇದ್ದರೂ ಶ್ರೇಣೀ ಕೃತ ಸಾಮಾಜಿಕ ವ್ಯವಸ್ಥೆಯಲ್ಲಿ  ಕೆಳಮೆಟ್ಟಿಲಲ್ಲಿದ್ದ ಯಾದವ ಸಮುದಾಯಕ್ಕೆ ಆತ್ಮಗೌರವವನ್ನು ತಂದುಕೊಟ್ಟವರು ಲಾಲು. ಅಂತಹ ನಾಯಕನನ್ನು ಅವರ ಜಾತಿಯ ಜನರೆ ಒಂದಲ್ಲ ಎರಡೂ ಚುನಾವಣೆಯಲ್ಲಿ ತಿರಸ್ಕರಿಸಿ ಮೂಲೆಗುಂಪು ಮಾಡಿಬಿಟ್ಟರು. ಬಿಹರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸುಶಿಕ್ಷಿರಿರುವ ಕರ್ನಾಟಕದಲ್ಲಿ ನಡೆದದ್ದು ಇದಕ್ಕೆ ತದ್ವಿರುದ್ದವಾದದ್ದು ಜಾತ್ಯತೀತ ಸಮಾಜ ನಿರ್ಮಾಣದ ಕನಸು ಕಂಡ ಮತ್ತು ಸ್ವಂತ ಶ್ರಮ ಇಲ್ಲದ ಸಂಪತ್ತು ಅಮೇಧ್ಯಕ್ಕೆ ಸಮಾನ ಎಂದು ತಿರಸ್ಕರಿಸಿದ ವಚನಕಾರರ ಪರಂಪರೆಯ ವೀರಶೈವ ಸ್ವಾಮಿಗಳೇ ಗೋಣೂ ಮುರಿಯುವಷ್ಟು ಭಾರದ ಭ್ರಷ್ಟಾಚಾರದ ಹೊರೆ ಹೊತ್ತುಕೊಂಡಿರುವ ಯಡಿಯೂರಪ್ಪನವರನ್ನು ಜಾತಿ ಹೆಸರಲ್ಲಿ ಸಮರ್ಥಿಸಲು ಬೀದಿಗಿಳಿದು ಬಿಟ್ಟರು.
ಒಂದರ್ಥದಲ್ಲಿ ಭ್ರಷ್ಟ ರ್‍ಆಜಕಾರಣಿಗಳೆಲ್ಲರೂ ‘ಜಾತ್ಯಾತೀತ’ರು, ಅವರಲ್ಲಿ ಪ್ರಾಮಾಣಿಕವಾದ ಜಾತಿ ಪ್ರೀತಿ ಇರುವುದೇ ಇಲ್ಲ.
ತಾವೂ ಬದುಕುಳಿಯಲು ಅವರು ಜಾತಿಯ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಲಾಲು ಪ್ರಸಾದ್ ಮಾಡಿದ್ದು ಇದನ್ನೇ. ಯಡಿಯೂರಪ್ಪನವರು ಮಾಡುತ್ತಿರುವುದು ಕೂಡಾ ಇದನ್ನೇ ಜಾತಿ ಕಾರಣಕ್ಕಾಗಿ ಒಬ್ಬರನ್ನು ಪ್ರೀತಿಸುವುದು ಎಷ್ಟು ಕೆಟ್ಟದೋ, ಕೇವಲ ಜಾತಿ ಕಾರಣಕ್ಕಾಗಿ ಒಬ್ಬರನ್ನು ದ್ವೇಷಿಸುವುದು ಕೂಡಾ ಅಷ್ಟೇ ಕೆಟ್ಟದ್ದು. ಇದನ್ನು ಮೊದಲು ಅರ್ಥಮಾಡಿಕೊಂಡವರು ನಿತೀಶ್ ಕುಮಾರ್. ಅವರ ಇಂದಿನ ಯಶಸ್ಸಿಗೆ ಇದೂ ಒಂದು ಕಾರಣ. ಲಾಲೂ ಪ್ರಸಾದ್ ಅವರು ಮಾತ್ರ ತನ್ನ ರಾಜಕೀಯ ವಿರೋಧಿ ಎಂಬ ನಿರ್ಧಾರಕ್ಕೆ ಬಂದ ನಿತೀಶ್, ಯಾದವ ಸಮುದಾಯವನ್ನು ದ್ವೇಶಿಸಲು, ಮೂಲೆಗುಂಪು ಮಾಡಲು ಹೋಗಲಿಲ್ಲ. ಯಾದವರಿಗೂ ಸಂಪುಟದಲ್ಲಿ ಸ್ಥಾನಮಾನ ನೀಡಿದರು. ಆ ಜಾತಿಯಲ್ಲಿರುವ ಸಜ್ಜನರನ್ನು ಪಕ್ಕದಲ್ಲಿಟ್ಟುಕೊಂಡೇ ಲಾಲು ಪ್ರಸಾದ್ ಅವರನ್ನು ಏಕಾಂಗಿಯನ್ನಾಗಿ ಮಾಡಿದರು. ಅಷ್ಟೇ ಅಲ್ಲ, ಅವರು ದ್ವೇಷದ ರಾಜಕಾರಣಕ್ಕೂ ಇಳಿಯಲಿಲ್ಲ. ನಿತೀಶ್ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಲಾಲು ಪ್ರಸಾದ್ ಆಡಳಿತದ ಅವಧಿಯ ಅಕ್ರಮಗಳ ತನಿಖೆಗಾಗಿ ಆಯೋಗ ನೇಮಿಸಬೇಕೆಂಬ ಒತ್ತಡ ಇತ್ತು. ಆ ರೀತಿ ಸಲಹೆ ಕೊಟ್ಟವರತ್ತ ನಿತೀಶ್ ಸುಮ್ಮನೆ ಕಿರುನಗೆ ಸೂಸಿ ಮಾತು ಬದಲಿಸುತ್ತಿದ್ದರಂತೆ. ತನಿಖಾ ಆಯೋಗಗಳು ಇನ್ನಷ್ಟು ರಾಜಕೀಯ ದ್ವೇಷದವನ್ನು ಹುಟ್ಟುಹಾಕಬಹುದೇ ವಿನಾ ತಪ್ಪಿತಸ್ಥರನ್ನು ಶಿಕ್ಷಿಸಲು ನೆರವಾಗಲಾರದು ಎಂಬ ವಾಸ್ತವ ನಿತೀಶ್ ಗೆ ಗೊತ್ತಿತ್ತು. ಯಡಿಯೂರಪ್ಪನವರು ಈಗಾಗಲೇ ಹದಿನಾರು ವರ್ಷಗಳ ಅವಧಿಯ ರಾಜಕೀಯ ಅಕ್ರಮಗಳ ತನಿಖೆಗೆ ಹೊರಟಿದ್ದಾರ್‍ಎ, ಇನ್ನೂ ಯಾರಾದರೂ ಕುಟುಕಿದರೆ ರಾಜ್ಯದ ಮೊದಲ ಮುಖ್ಯಮಂತ್ರಿಯ ಆಡಳಿತಾವಧಿಯಿಂದಲೇ ತನಿಖೆಗೆ ಆದೇಶ ನೀಡಿದರೂ ಅಚ್ಚರಿಯೇನಿಲ್ಲ. ಹೋಲಿಕೆ ಮಾಡದಿರುವುದು ಹೇಗೆ?